Chief Editor
Manohar. R (Manu)
Photo Journalist
chitrataramanu@gmail.com
+91 9845549026
ಇದು ಪಂಚಾಯ್ತಿ ಎಲೆಕ್ಷನ್ ದರ್ಬಾರ್ - 3.5/5 ****
Posted date: 10 Sat, Jun 2023 08:56:56 AM
ಅಧಿಕಾರದಾಹ ಎಲ್ಲರಿಗೂ ಇರುತ್ತದೆ. ನಾನು ಒಮ್ಮೆಯಾದರೂ ಪಂಚಾಯ್ತಿ ಮೆಂಬರ್ ಆಗಬೇಕೆಂದು ಹಳ್ಳಿಯ ಬಹುತೇಕ ಮಂದಿ ಕನಸು ಕಂಡಿರುತ್ತಾರೆ.
 
ಇಂಥ ಹಳ್ಳಿ ಪಂಚಾಯ್ತಿಯ ವಿಹಂಗಮ ನೋಟವೇ ದರ್ಬಾರ್.  ಗ್ರಾಮ ಮಟ್ಟದಲ್ಲಿ ನಡೆಯುವ ಗ್ರಾಮ ಪಂಚಾಯತಿ ಚುನಾವಣೆಗಳು ಹೇಗೆ ನಡೆಯುತ್ತವೆ, ಅಬ್ಯರ್ಥಿಗಳು ಏನೆಲ್ಲ ಸೋಗು ಹಾಕುತ್ತಾರೆ, ಅಲ್ಲೂ ಸಹ ಹಣ, ಹೆಂಡದ  ಹೊಳೆ ಯಾವರೀತಿ ಹರಿಯುತ್ತದೆ ಇದನ್ನೆಲ್ಲ ತುಂಬ ಸೊಗಸಾಗಿ,  ಕಣ್ಣಿಗೆ ಕಟ್ಟುವಂತೆ  ಹೇಳಿರುವ ಚಿತ್ರವಿದು. ನಮ್ಮ ದೇಶದ ರಾಜಕೀಯದ ಮೂಲಮಂತ್ರ  ಹುಟ್ಟುವುದೇ ಇಲ್ಲಿ.  ಹಳ್ಳಿಯೇ. ಅಲ್ಲಿ ನಡೆಯುವ ಪಂಚಾಯ್ತಿ ಚುನಾವಣಾ ಕಾವು ದೇಶದ ಪ್ರದಾನ ಮಂತ್ರಿಯ ಆಯ್ಕೆಯಷ್ಟೇ  ಜೋರಾಗಿರುತ್ತದೆ.  
 
ಮಾನವನ ನಡುವಿನ ಸಂಬಂಧಗಳನ್ನು ಚುನಾವಣಾ ರಾಜಕೀಯ  ಹೇಗೆ ಹಾಳು ಮಾಡುತ್ತದೆ ಎಂಬುದನ್ನು  ನಿರ್ದೇಶಕ  ವಿ.ಮನೋಹರ್ ಅವರು ಅರ್ಥಪೂರ್ಣವಾಗಿ ಹೇಳಿದ್ದಾರೆ. ವಿ.ಮನೋಹರ್ ಅವರ ನಿರ್ದೇಶನದ ಮೂರನೇ ಚಿತ್ರ ಇದಾಗಿದ್ದು,  ಚಿತ್ರದಲ್ಲಿ ನಾಯಕ ಮಧುಸೂದನ್ ಪಾತ್ರವನ್ನು ಯುವನಾಯಕ  ಸತೀಶ್ ನಿಭಾಯಿಸಿದ್ದಾರೆ. ಪಂಚಾಯ್ತಿ ಎಲೆಕ್ಷನ್‌ಗಳಲ್ಲಿ ನಡೆಯುವ ರಾಜಕೀಯ ಜಿದ್ದಾಜಿದ್ದಿ,  ಹಣ, ಹೆಂಡ, ಒಡವೆಯ ಆಸೆಗೆ ಬಲಿಯಾಗಿ  ಗ್ರಾಮಸ್ಥರು  ಅಯೋಗ್ಯ ವ್ಯಕ್ತಿಯನ್ನು ಆಯ್ಕೆಮಾಡಿದಾಗಿ ಮುಂದೆ ಏನೆಲ್ಲ ಪರಿಣಾಮ ಎದುರಿಸಬೇಕಾಗುತ್ತೆ ಎಂಬುದನ್ನೂ ಸಹ ಚಿತ್ರದಲ್ಲಿ ಹೇಳಲಾಗಿದೆ.  ಹಳ್ಳಿಗಳಲ್ಲೂ ಸಹ ರಾಜಕೀಯ ಹೇಗೆ ಆವರಿಸಿಕೊಂಡಿದೆ ಎಂಬುದನ್ನು ಚಿತ್ರದಲ್ಲಿ  ಹೇಳಲಾಗಿದೆ. ಮಂಡ್ಯ ಜಿಲ್ಲೆಯ ವೀರಾಪುರ ಎಂಬ ಗ್ರಾಮದಲ್ಲಿ  ನಡೆಯುವ  ಘಟನೆಗಳೆ ಈ ಚಿತ್ರದ ಕಥಾವಸ್ತು. ನಾಯಕ ಮಧುಸೂದನ್(ಸತೀಶ್)  ಗ್ರಾಮದ ರೈಸ್‌ಮಿಲ್ ಮಾಲೀಕನ ಮಗ, ಕೆಲಸ ಮಾಡದೆ ಸೋಮಾರಿಗಳಾಗಿ  ತಿರುಗುವವರು, ಜಗಲಿ ಕಟ್ಟಿಯಲ್ಲಿ ಇಸ್ಪೀಟು ಆಡುತ್ತ ಟೈಮ್‌ಪಾಸ್ ಮಾಡುವವರು, ಪುಂಡು ಪೋಕರನ್ನು ಕಂಡರೆ ಈತನಿಗಾಗದು. ಮುಖ ಮೂತಿ ನೋಡದೆ ಅವರನ್ನು ಚಚ್ಚುವುದು ಈತನ ಹವ್ಯಾಸ. ಈತನ ಈ ನಡವಳಿಕೆ ಗ್ರಾಮದ ಕೆಲವರಿಗೆ ಆಗದು. 
 
ಇದೇ ಸಮಯದಲ್ಲಿ ಊರಿನ ಜಾತ್ರೆ ನಡೆಯುತ್ತದೆ, ಈ ಜಾತ್ರೆಯಲ್ಲಿ  ಪಕ್ಕದೂರಿಂದ ಬಂದ ದೀಪಿಕಾ(ಜಾಹ್ನವಿ)ಳನ್ನು ನೋಡಿದ ಮಧು, ಅವಳ ಅಂದಕ್ಕೆ ಮಾರುಹೋಗುತ್ತಾನೆ. ಒಮ್ಮೆ ಅಕಸ್ಮಾತಾಗಿ ನಾಯಕಿಗೆ ಹೆಜ್ಜೇನು ಸುತ್ತುವರಿದಾಗಿ ಆಕೆಯನ್ನು ಮಧುನೇ  ರಕ್ಷಿಸುತ್ತಾನೆ. ಅಲ್ಲಿಂದ ಇಬ್ಬರ ನಡುವೆ ಪ್ರೀತಿ ಮತ್ತಷ್ಟು ಬಲಗೊಳ್ಳುತ್ತದೆ. ಈ ನಡುವೆ ಗ್ರಾಮದಲ್ಲಿ  ಪಂಚಾಯ್ತಿ ಚುನಾವಣೆ ಅನೌನ್ಸ್ ಆಗುತ್ತದೆ, ಇಡೀ ಊರಲ್ಲಿ ಈಸಲ ಯಾರು ನಿಲ್ಲಬೇಕು, ಯಾರು ಗೆಲ್ಲಬೇಕು ಎಂಬಬಗ್ಗೆ ಗುಸುಗುಸು ಆರಂಭವಾಗುತ್ತದೆ. ಸತೀಶನನ್ನು ಕಂಡರಾಗದ ಒಂದಷ್ಟು ಮಂದಿ, ಸತೀಶನನ್ನೇ  ಚುನಾವಣೆಗೆ ನಿಲ್ಲುವಂತೆ ಪುಸಲಾಯಿಸಿ, ತಾವು ಸಹಾಯ ಮಾಡುವುದಾಗಿ ಭರವಸೆ ನೀಡುತ್ತಾರೆ. ಬೆಂಬಲಿಸುವಂತೆ ನಾಟಕವಾಡಿ  ಈತನನ್ನು ಸೋಲಿಸಬೇಕೆನ್ನುವುದು ಇವರ ಗುರಿ. ಈ ಕಪಟ ಅರಿಯದ ಮಧು ತನಗೆ ಜನರ ಬೆಂಬಲವಿದೆ ಎಂದುಕೊಂಡು ಚುನಾವಣೆ ಎದುರಿಸಲು ಸಿದ್ದನಾಗುತ್ತಾನೆ. ಸ್ನೇಹಿತರ ಸಲಹೆಯಂತೆ ತನ್ನ ಒರಟು ನಡವಳಿಕೆಯನ್ನು ಬದಲಿಸಿಕೊಳ್ಳುತ್ತಾನೆ. ಇನ್ನು ಈತನಿಗೆ ಎದುರಾಗಿ ಊರತುಂಬ ಸಾಲ ಮಾಡಿಕೊಂಡು ಎಲ್ಲರಿಂದ ಥೂ ಎಂದು ಉಗಿಸಿಕೊಳ್ಳುವ ನಾಗ(ಕಾರ್ತೀಕ್)ನನ್ನು ಮಧುಗೆ ಬೆಂಬಲಿಸಿದವರೇ ನಿಲ್ಲಿಸುತ್ತಾರೆ. ಮುಂದೆ ಚುನಾವಣೆ ನಡೆದಾಗ ಯಾರು ಗೆಲ್ಲುತ್ತಾರೆ, ಗೆದ್ದವರಿಂದ ಊರ ಗತಿ ಏನಾಯಿತು, ಹಳ್ಳಿ ಜನರಿಗೆ ತಾವು ಮಾಡಿದ  ತಪ್ಪಿನ ಅರಿವಾಯಿತೇ,  ಇದಕ್ಕೆಲ್ಲ ಉತ್ತರ ದರ್ಬಾರ್ ಚಿತ್ರದಲ್ಲಿದೆ. ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ನಡೆಯುವ ರಾಜಕೀಯ, ಅಧಿಕಾರದಾಸೆಗಾಗಿ ಯಾರು, ಎಷ್ಟು ಆಳಕ್ಕ ಬೇಕಾದರೂ ಹೋಗುತ್ತಾರೆ ಎಂಬುದನ್ನು ವಿಡಂಬನಾತ್ಮಕ ಕಥಾನಕದೊಂದಿಗೆ  ದರ್ಬಾರ್ ಚಿತ್ರದಲ್ಲಿ ಹೇಳಲಾಗಿದೆ. 
 
ನಾಯಕ ಸತೀಶ್ ತುಂಬಾ ಸಹಜವಾಗಿ ನೈಜವಾಗಿ ಅಭಿನಯಿಸುವ ಮೂಲಕ ವೀಕ್ಷಕರಿಗೆ ಇಷ್ಟವಾಗಿದ್ದಾರೆ, ನಾಯಕ ಅಷ್ಟೇ ಅಲ್ಲ ಚಿತ್ರದ ಎಲ್ಲ ಪಾತ್ರಗಳೂ ಸಹಜವಾದ ಅಭಿನಯದ ಮೂಲಕ ಕಥೆಯ ಓಟಕ್ಕೆ ಸಾಥ್ ನೀಡಿದ್ದಾರೆ. ಸಿನಿಮಾ ನೋಡುತ್ತಿರುವ ಪ್ರೇಕ್ಷಕರಿಗೆ ಎಲ್ಲೂ ತಾವೊಂದು ಸಿನಿಮಾ ನೋಡ್ತಿದ್ದೇನೆ ಅನ್ನಿಸುವುದೇ ಇಲ್ಲ, ಗ್ರಾಮವೊಂದರಲ್ಲಿ ತಾವೇ ಇದ್ದು, ತಮ್ಮ ಸುತ್ತಲೂ ಘಟನೆಗಳು ನಡೆಯುತ್ತಿವೆ ಎನಿಸುತ್ತದೆ, ಅಷ್ಟು ನೈಜತೆ ಚಿತ್ರದ ಪಾತ್ರಗಳಲ್ಲಿದೆ.  ಇನ್ನು  ಉಪೇಂದ್ರ ಹಾಡಿರುವ ಎಲೆಕ್ಷನ್ ಸಾಂಗ್ ಸಖತ್ ಎಂಟರ್‌ಟೈನಿಂಗ್ ಆಗಿದೆ. ಅದರಲ್ಲೂ ವಿ. ಮನೋಹರ್ ಅವರ ಸಂಗೀತ ಎಂದರೆ ಕೇಳಬೇಕೇ, ಜೊತೆಗೆ ಡ್ಯುಯೆಟ್ ಸಾಂಗ್ ಕೂಡ ಸುಂದರವಾಗಿ ಮೂಡಿಬಂದಿದೆ. ನಾಯಕ ಕಮ್ ನಿರ್ಮಾಪಕ ಸತೀಶ್ ಮೊದಲ ಪ್ರಯತ್ನದಲ್ಲೇ  ಒಂದೊಳ್ಳೇ ಪ್ರಾಡಕ್ಟನ್ನು ಕನ್ನಡ ಸಿನಿರಸಿಕರಿಗೆ  ಕೊಟ್ಟಿದ್ದಾರೆ. ಮುಂದೆ ಹೀಗೇ ನಡೆಯುತ್ತೆ ಅಂತ ನಾವೇನಾದರೂ ಊಹಿಸಿಕೊಂಡರೆ ಅದು ಬೇರೆಯೇ ಆಗಿರುತ್ತೆ, ಇದು ಪ್ರೇಕ್ಷಕರಿಗೆ ತುಂಬಾನೇ ಹಿಡಿಸುವ ಅಂಶ. ಮಾಸ್‌ಮಾಸ ಹಾಗೂ ವಿನೋದ್ ಸಾರಥ್ಯದ ಮೂರು ಆಕ್ಷನ್‌ಗಳೂ ಸಾಹಸ ಪ್ರಿಯರನ್ನು ರಂಜಿಸುತ್ತವೆ. ನಾಯಕಿ ಜಾಹ್ನವಿ, ನಾಗನಾಗಿ ನಟಿಸಿರುವ ಜಾರ್ತೀಕ್, ನಾಯಕನ ಸ್ನೇಹಿತ ಸಂತು ಎಲ್ಲರೂ  ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಬಹಳ ದಿನಗಳ ನಂತರ  ಉತ್ತಮ  ಸದಭಿರುಚಿಯ ಚಿತ್ರ ನೋಡಿದ ಅನುಭವ ಖಂಡಿತ ಪ್ರೇಕ್ಷಕನಿಗೆ ಆಗುತ್ತದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಇದು ಪಂಚಾಯ್ತಿ ಎಲೆಕ್ಷನ್ ದರ್ಬಾರ್ - 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.